ಕೇಂಬಿಯಮ್

ಕೆಲವು ಬಗೆಯ ಸಸ್ಯಗಳಲ್ಲಿ ಕಾಣಬರುವ ಒಂದು ರೀತಿಯ ವರ್ಧನ ಅಥವಾ ವಿಭಜನ ಶಕ್ತ ಅಂಗಾಂಶ.  ಕೋಶ ವಿಭಜನೆ ಇದರ ಜೀವಕೋಶಗಳ ಪ್ರಮುಖ ಲಕ್ಷಣ.  ವಿಭಜನೆಯಿಂದಾಗಿ ರೂಪುಗೊಳ್ಳುವ ಹೊಸಜೀವಕೋಶಗಳು ಕ್ರಮೇಣ ವಿಭೇದನ ಹೊಂದಿ ಆನುಷಂಗಿಕ ಅಂಗಾಂಶಗಳಾಗಿ ಮಾರ್ಪಾಡಾಗುತ್ತವೆ.  ಇದರಿಂದ ಸಸ್ಯದ ಗಾತ್ರ ಹೆಚ್ಚುತ್ತ ಬರುತ್ತದೆ.  ಹೀಗೆ ಸಸ್ಯಗಳ ಗಾತ್ರದ ಹೆಚ್ಚಳದಲ್ಲಿ ಪ್ರಮುಖ ಪಾತ್ರವಹಿಸುವ ಅಂಗಾಂಶವೆನಿದೆ ಕೇಂಬಿಯಮ್.  ಇದರ ಚಟುವಟಿಕೆಯಿಂದ ಉಂಟಾಗುವ ಬೆಳವಣಿಗೆಗೆ ಅನುಷಂಗಿಕ (ಸೆಕೆಂಡರಿ) ಬೆಳವಣಿಗೆಯೆಂದೂ, ರೂಪುಗೊಳ್ಳುವ ಅಂಗಾಂಶಗಳಿಗೆ ಅನುಷಂಗಿಕ ಅಂಗಾಂಶಗಳೆಂದೂ ಹೆಸರಿದೆ.

	ಎಲ್ಲ ಬಗೆಯ ಸಸ್ಯಗಳಲ್ಲೂ ಕೇಂಬಿಯಮ್ ಇಲ್ಲ.  ನಗ್ನಬೀಜ ಸಸ್ಯಗಳಾದ ಸೈಕ್ಯಾಸ್, ಗಿಂಕೊ, ಪೈನಸ್ ಮುಂತಾದ ಸಸ್ಯಗಳಲ್ಲಿ ಮತ್ತು ಬಹುಪಾಲು ಬಗೆಯ ದ್ವಿದಳ ಸಸ್ಯಗಳಲ್ಲಿ (ಮುಖ್ಯವಾಗಿ ಮರಗಳು ಮತ್ತು ಪೊದೆ ಸಸ್ಯಗಳು) ಮಾತ್ರ ಕೇಂಬಿಯಮ್ ಇದೆ.  ಇದಕ್ಕೆ ಅಪವಾದವಾಗಿ ಕೇಲವು ರೀತಿಯ ಮೂಲಿಕೆ ರೂಪದ ದ್ವಿದಳ ಸಸ್ಯಗಳಲ್ಲೂ (ಉದಾ : ಕೀನೊಪೋಡಿಯಮ್, ಅಮರ್ಯಾಂತಸ್) ವೃಕ್ಷಸ್ವರೂಪೀ ಏಕದಳ ಸಸ್ಯಗಳಲ್ಲೂ (ಉದಾ: ಡ್ರಸೀನ, ಯುಕ, ಆಲವೀ, ಕಾರ್ಡಲೈನೀ) ಕೇಂಬಿಯಮ್ ಕಾಣಬರುವುದುಂಟು.

	ಕೇಂಬಿಯಮ್‍ನಲ್ಲಿ ವ್ಯಾಸ್ಕ್ಯುಲರ್ ಕೇಂಬಿಯಮ್ ಮತ್ತು ಕಾರ್ಕ್ ಕೇಂಬಿಯಮ್ (ಫೆಲೋಜನ್) ಎಂಬ ಎರಡು ಬಗೆಗಳಿವೆ.

	ಕಾಂಡದ ಒಂದೊಂದು ನಾಳಕೂರ್ಚದಲ್ಲೂ ಮೊದಲಿನಿಂದ ಇರುವ ಕ್ಸೈಲಮ್ ಮತ್ತು ಪ್ಲೋಯೆಮ್ಗಳ ನಡುವೆ ಇರುವ ಒಂದು ತೆಳುಪಟ್ಟಿಯಂಥ ರಚನೆಯೇ ವ್ಯಾಸ್ಕ್ಯುಲರ್ ಕೇಂಬಿಯಮ್.  ಇದಕ್ಕೆ ಫೆಸಿಕ್ಯುಲಾರ್ ಕೇಂಬಿಯಮ್ ಎಂದು ಹೆಸರು.  ಕ್ರಮೇಣ ಅನುಷಂಗಿಕ ಬೆಳವಣಿಗೆ ಉಂಟಾಗುವ ವೇಳೆಗೆ ಒಂದು ಕೂರ್ಚಕ್ಕೂ ಇನ್ನೊಂದಕ್ಕೂ ನಡುವೆ ಇರುವ ಮೆಡಲರಿ ರೇ ಎಂಬ ಭಾಗದಲ್ಲಿ ಫೆಸಿಕ್ಯುಲಾರ್ ಕೇಂಬಿಯಮಿನ ಸಾಲಿನಲ್ಲೇ ಇರುವ ಕೆಲವು ಕೋಶಗಳು ತಮ್ಮ ವಿಭಜನಶಕ್ತಿಯನ್ನು ಮರಳಿ ಪಡೆದು ಹಲವಾರು ಕೋಶಗಳನ್ನು ಉತ್ಪಾದಿಸಲು ಯತ್ನಿಸುತ್ತವೆ.  ಈ ಗುಂಪಿಗೆ ಇಂಟರ್ ಫೆಸಿಕ್ಯುಲಾರ್ ಕೇಂಬಿಯಮ್ ಎಂದು ಹೆಸರು.  ಕ್ರಮೇಣ ಈ ಎರಡು ಬಗೆಯ ಕೇಂಬಿಯಮ್‍ಗಳು ಅಡ್ಡಡ್ಡಲಾಗಿ ವಿಸ್ತಾರಗೊಂಡು ಒಂದರೊಡನೊಂದು ಕೂಡಿಕೊಂಡು ವೃತ್ತಾಕಾರ ತಾಳಿದ ಒಂದು ಪಟ್ಟಿಯಂತಾಗುತ್ತವೆ.  ಇಂಥ ಕೇಂಬಿಯಮ್ ಪಟ್ಟಿಯಿಂದ ಅನುಷಂಗಿಕ ಬೆಳವಣಿಗೆಯೆಂಬುದು ಆರಂಭವಾಗುತ್ತದೆ.  ಸತತ ವಿಭಜನೆಯಿಂದ ಈ ಪಟ್ಟಿಯ ಒಳಗೂ ಹೊರಗೂ ಅಸಂಖ್ಯ ಕೋಶಗಳು ಉತ್ಪಾದನೆಯಾಗುತ್ತವೆ.  ಹೊರಗಿನ ಭಾಗದಲ್ಲಿ ಉತ್ಪಾದನೆಯಾದ ಕೋಶಗಳು ಫ್ಲೋಯೆಮ್ ಕೋಶಗಳೊಂದಿಗೆ ಬೆರೆತು, ಮುಂದೆ ಅನುಷಂಗಿಕ ಫ್ಲೋಯೆಮ್ ಘಟಕಗಳಾಗಿ ರೂಪುಗೊಳ್ಳುತ್ತವೆ.  ಕೇಂಬಿಯಮಿನ ಒಳಭಾಗದಲ್ಲಿ ಉತ್ಪಾದನೆಯಾದ ಕೋಶಗಳೆಲ್ಲಾ ಕ್ಸೈಲಮ್ ಕೋಶಗಳೊಡನೆ ಬೆರೆತು, ಕ್ರಮೇಣ ಅನುಷಂಗಿಕ ಕ್ಸೈಲಮ್ ಘಟಕಗಳಾಗಿ ರೂಪುಗೊಳ್ಳುತ್ತವೆ.  ಸಾಮಾನ್ಯವಾಗಿ ಕೇಂಬಿಯಮಿನ ಚಟುವಟಿಕೆ ಹೊರಭಾಗಕ್ಕಿಂತ ಒಳಭಾಗದಲ್ಲಿಯೇ ಹೆಚ್ಚಾಗಿರುತ್ತದೆ.  ಇದರಿಂದ ಅನುಷಂಗಿಕ ಕ್ಸೈಲಮಿನ ಪ್ರಮಾಣ ಅನುಷಂಗಿಕ ಫ್ಲೋಯೆಮಿನ ಮೊತ್ತಕ್ಕಿಂತ ಅಧಿಕವಾಗಿರುತ್ತದೆ.  ಹೀಗಾಗಿ ಬರುಬರುತ್ತ ಕಾಂಡದ ಬಹುಭಾಗವೆಲ್ಲ ಅನುಷಂಗಿಕ ಕ್ಸೈಲಮಿನಿಂದ ಆವೃತವಾಗುತ್ತದೆ.  ಈ ರೀತಿಯ ಬೆಳವಣಿಗೆ ಸಾಕಷ್ಟು ಆದಾಗ ಕೇಂಬಿಯಮಿನ ಹೊರಗಿರುವ ಕೋಶಗಳೆಲ್ಲ ಅಡ್ಡಗಲವಾಗಿ ಹಿಗ್ಗುತ್ತ ಬಂದು ಅವುಗಳಲ್ಲಿ ಮೂಲ ಫ್ಲೋಯೆಮಿನಂಥ ಕೆಲವು ಕೋಶಗಳು ನಶಿಸಿಹೋಗುವುದೂ ಉಂಟು.  ಆದರೆ ಮೂಲ ಕ್ಸೈಲಮ್ ಮಾತ್ರ ಕಡೆತನಕ ಅಬಾಧಿತವಾಗಿ ಉಳಿಯುತ್ತದೆ.  ಇದೇ ವೇಳೆಗೆ ಅನುಷಂಗಿಕ ಕ್ಸೈಲಮ್ ಮತ್ತು ಫ್ಲೋಯೆಮಿನ ಕೆಲವು ಭಾಗಗಳಲ್ಲಿ  ಅಲ್ಲಲ್ಲೆ ಕೇಂದ್ರಾಭಿಗಾಮಿಯಾದ ಹಲವಾರು ಉದ್ದುದ್ದನೆಯ ತೆಳುಭಿತ್ತಿಯುಳ್ಳ ಪ್ಯಾರೆಂಕೈಮ ಕೋಶಗಳನ್ನು ಕೇಂಬಿಯಮ್ ಉತ್ಪಾದಿಸುತ್ತದೆ.  ಇವುಗಳಿಗೆ ಅನುಷಂಗಿಕ ಮೆಡಲರಿ ರೇಗಳೆಂದು ಹೆಸರು.  ಆಹಾರ ಘಟಕಗಳನ್ನು ಕೇಂದ್ರಭಾಗದಿಂದ ಹೊರಭಾಗಕ್ಕೆ ಸಾಗಿಸುವುದೇ ಇವುಗಳ ಕಾರ್ಯ.  ಹೆಚ್ಚು ಕಡಿಮೆ ಮೇಲೆ ಹೇಳಿರುವ ಬಗೆಯ ಅನುಷಂಗಿಕ ಬೆಳವಣಿಗೆ ಬೇರುಗಳಲ್ಲೂ ಕಾಣಬರುತ್ತದೆ.  ಬೇರಿನ ನಾಳಕೂರ್ಚಗಳ ಮೂಲ ಕ್ಸೈಲಮ್ ಪಟ್ಟಿಗಳ ಹೊರಗೆ ಪೆರಿ ಸೈಕಲ್ ಎಂಬ ಭಾಗದಲ್ಲಿಯೂ ಮತ್ತು ಫ್ಲೋಯೆಮಿನ ಒಳಭಾಗವಾದ ಗ್ರೌಂಡ್ ಟಿಷ್ಯು ಎಂಬ ಭಾಗದಲ್ಲಿಯೂ ನಿರ್ದಿಷ್ಟ ಸಾಲುಗಳುಳ್ಳ ಕೇಂಬಿಯಮ್ ಕಾಣಿಸಿಕೊಳ್ಳುತ್ತದೆ.  ಇದು ವಿಭಜನೆ ಹೊಂದುತ್ತ ಕೇಂಬಿಯಮಿನ ಒಳಭಾಗಕ್ಕೆ ಹೆಚ್ಚು ಹೆಚ್ಚು ಹೊಸ ಕೋಶಗಳನ್ನೂ ಹೊರಭಾಗಕ್ಕೆ ಸ್ವಲ್ಪ ಪರಿಮಾಣದಲ್ಲಿ ಹೊಸಕೋಶಗಳನ್ನೂ ಉತ್ಪಾದಿಸುತ್ತ ಹೋಗುತ್ತದೆ.  ಮುಂದ ಕ್ಸೈಲಮಿಗೆ ಹತ್ತಿರದ ಕೋಶಗಳು ಅನುಷಂಗಿಕ ಕ್ಸೈಲಮ್ ಘಟಕಗಳಾಗಿಯೂ, ಫ್ಲೋಯೆಮಿಗೆ ಹತ್ತಿರದ ಕೋಶಗಳು ಅನುಷಂಗಿಕ ಫ್ಲೋಯೆಮ್ ಘಟಕಗಳಾಗಿಯೂ ರೂಪುಗೊಳ್ಳುತ್ತವೆ.  ಈ ವೇಳೆಗೆ ಕೇಂಬಿಯಮ್ ಕೋಶಗಳೆಲ್ಲ ಕೂಡಿಕೊಂಡು ಸ್ವಲ್ಪ ಹೆಚ್ಚು ಕಡಿಮೆ ಒಂದು ವಕ್ರಾಕಾರದ ಪಟ್ಟಿಯಂತೆ ಪರಿಣಮಿಸುತ್ತವೆ.  ಕ್ರಮೇಣ ಕೇಂಬಿಯಮಿನ ಒಳಭಾಗದಲ್ಲಿ ಅನುಷಂಗಿಕ ಕ್ಸೈಲಮ್ ಹೆಚ್ಚು ಉತ್ಪಾದನೆಯಾಗಿ ಕೇಂಬಿಯಮ್ ಪಟ್ಟಿ ಒಂದು ಪೂರ್ಣ ವೃತ್ತಾಕರ ತಾಳುವಂತಾಗುತ್ತದೆ.  ಅದರ ಹೊರಗೆ ಉತ್ಪಾದನೆಯಾಗುವ ಅನುಷಂಗಿಕ ಫ್ಲೋಯೆಮ್ ಕೂಡ ಸ್ವಲ್ಪ ಹೆಚ್ಚು ಕಡಿಮೆ ವೃತ್ತಾಕಾರವನ್ನೇ ತಾಳುತ್ತದೆ.  ಈ ವೇಳೆಗೆ ಮೂಲ ಫ್ಲೋಯೆಮ್ ಅಲ್ಲಲ್ಲೇ ಕೆಲವು ತೇಪೆ ಅಥವಾ ತುಂಡುಗಳಂತೆ ವಿಭಾಗವಾಗಿ ಕ್ರಮೇಣ ನಶಿಸಿ ಹೋಗುತ್ತದೆ.  ಮೂಲ ಕ್ಸೈಲಮ್ ಮಾತ್ರ ಅತ್ಯಂತ ಒಳಭಾಗಕ್ಕೆ ದೂಡಲ್ಪಟ್ಟರೂ ಕಡೆತನಕ ಅದು ಅಬಾಧಿತವಾಗಿ ಉಳಿಯುತ್ತದೆ.  ಇನ್ನೂ ಕೆಲವು ಸಮಯದ ಅನಂತರ ಮೂಲ ಕ್ಸೈಲಮಿನ ತುದಿಯಲ್ಲಿದ್ದ ಕೆಲವು ಕೇಂಬಿಯಮ್ ಕೋಶಗಳು ವಿಭಜನೆಯಲ್ಲಿ ತಟಸ್ಥವಾಗಿ ಉಳಿದು, ಕ್ರಮೇಣ ಅವು ಕೇಂದ್ರಾಭಿಗಾಮಿಯಾಗಿ ಉದ್ದುದ್ದನೆಯ ತೆಳುಭಿತ್ತಿಯುಳ್ಳ ಕೋಶಗಳಾಗಿ ರೂಪುಗೊಳ್ಳುತ್ತವೆ.  ಅವಕ್ಕೆ ಮೂಲ ಮೆಡಲರಿ ರೇ ಗಳೆಂದು ಹೆಸರು. ಬರುಬರುತ್ತ ಅನುಷಂಗಿಕ ಕ್ಸೈಲಮ್ ಮತ್ತು ಫ್ಲೋಯೆಮ್ಗಳ ನಡುವೆಯೂ ಕೇಂಬಿಯಂನಿಂದ ಕೇಂದ್ರಾಭಿಗಾಮಿಯಾಗಿ ಹಲವಾರು ಉದ್ದುದ್ದನೆಯ ಕೋಶಗಳು ಕಾಣಿಸಿಕೊಳ್ಳುತ್ತವೆ.  ಇವಕ್ಕೂ ಅನುಷಂಗಿಕ ಮೆಡಲರೀ ರೇ ಎಂದು ಹೆಸರಿದ್ದು ತಮ್ಮ ಕಾರ್ಯದಲ್ಲಿ ಕಾಂಡದ ಮೆಡಲರಿ ರೇಗಳನ್ನು ಹೋಲುತ್ತದೆ.

	ಕಾರ್ಕ್‍ಕೇಂಬಿಯಮ್ ಅಥವಾ ಫೆಲೊಜನ್: ಸಾಮಾನ್ಯವಾಗಿ ಅನುಷಂಗಿಕ ಬೆಳವಣಿಗೆ ಒಂದು ಪರಮಾವಧಿ ಮಿತಿ ಮೀರಿದ ಮೇಲೆ, ಬೇರುಗಳ ಪೆರಿಸೈಕಲ್ ಎಂಬ ಭಾಗದಲ್ಲಿಯೂ ಕಾಂಡಗಳ ಕಾರ್ಟೆಕ್ಸ್ ಎಂಬ ಭಾಗದಲ್ಲಿಯೂ ತೀವ್ರ ಚಟುವಟಿಕೆಯಿಂದ ಕಾಣಿಸಿಕೊಳ್ಳುವ ಮತ್ತೊಂದು ರೀತಿಯ ಕೇಂಬಿಯಮ್.  ಇದು ತೇಪೆಗಳ ರೂಪದಲ್ಲೊ ಇಲ್ಲವೆ ಸಂಪೂರ್ಣ ವೃತ್ತಾಕಾರವಾಗಿಯೊ ಇರುತ್ತದೆ.  ಇದರ ಕೋಶಗಳು ತಮ್ಮ ಸಹಜ ರೀತಿಯಲ್ಲಿಯೇ ತೀವ್ರ ವಿಭಜನೆಗೊಂಡು ಒಳಗೆ ಮತ್ತು ಹೊರಗೆ ಅನೇಕ ಕೋಶಗಳನ್ನು ಉತ್ಪಾದಿಸುತ್ತವೆ.  ಒಳಗಿನ ಕೋಶಗಳಿಗೆ ಫೆಲೊಡರ್ಮ್ ಅಥವಾ ಅನುಷಂಗಿಕ ಕಾರ್ಟೆಕ್ಸ್ ಎಂದೂ ಹೊರಗಿನ ಕೋಶಗಳಿಗೆ ಫೆಲೆಮ್ ಅಥವಾ ಕಾರ್ಕ್ ಕೋಶಗಳೆಂದೂ ಹೆಸರು.  ಈ ಮೂರು ಪದರಗಳ ಸಮೂಹಕ್ಕೆ (ಅಂದರೆ-ಫೆಲೆಮ್, ಫೆಲೊಜನ್ ಮತ್ತು ಫೆಲೊಡರ್ಮ್ ಕೋಶಗಳು) ಪೆರಿಡರ್ಮ್ ಎಂದು ಹೆಸರು.  ಇವುಗಳ ಮುಖ್ಯ ಕಾರ್ಯ ಒಳಗಿನ ಕೋಶ ಸಮೂಹಗಳಿಗೆಲ್ಲ ಸಾಕಷ್ಟು ರಕ್ಷಣೆ ನೀಡುವುದೇ ಆಗಿರುತ್ತದೆ.  ಈ ಭಾಗ ಹೆಚ್ಚಾಗಿ ಕಾಂಡದಲ್ಲಿಯೂ ಕೆಲಮಟ್ಟಿಗೆ ಬೇರಿನಲ್ಲಿಯೂ ತೊಗಟೆಯಾಗಿ ಪರಿಣಮಿಸುತ್ತದೆ.  ಇದು ಶಾಶ್ವತವಾಗಿ ಉಳಿಯಬಹುದು.  ಇಲ್ಲವೆ ಕ್ರಮೇಣ ಕಳಚಿ ಬಿದ್ದು ಹೋಗಬಹುದು.    		
(ಎಂ.ಎಸ್.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ